kptcl tentative exam date 2022: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಸ್ಥೆಯು ಇತ್ತೀಚೆಗೆ ಅಧಿಸೂಚಿಸಿದ್ದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಸ್ಪರ್ಧಾತ್ಮಕ ಪರೀಕ್ಷೆಗೆ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಕೆಪಿಟಿಸಿಎಲ್‌ನ ಸಹಾಯಕ ಇಂಜಿನಿಯರ್ ಇಲೆಕ್ಟ್ರಿಕಲ್ ಮತ್ತು ಸಿವಿಲ್, ಕಿರಿಯ ಇಂಜಿನಿಯರ್ ಇಲೆಕ್ಟ್ರಿಕಲ್ ಮತ್ತು ಸಿವಿಲ್ ವಿಭಾಗಗಳ ಹುದ್ದೆಗಳು, ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಇದಾಗಿದೆ.
ದಿನಾಂಕ 23-07-2022, 24-07-2022 ಹಾಗೂ 07-08-2022 ರಂದು ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್, ಕಿರಿಯ ಸಹಾಯಕ ಹುದ್ದೆಗಳಿಗೆ ಪರೀಕ್ಷೆ ನಡೆಸುವ ಕುರಿತು ಸಂಭಾವ್ಯ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಆಕ್ಷೇಪಣೆ ಅರ್ಜಿ ಆಹ್ವಾನ
ಕೆಪಿಟಿಸಿಎಲ್‌ನ ಸದರಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಸದರಿ ವೇಳಾಪಟ್ಟಿಗೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು ದಿನಾಂಕ 23-06-2022 ರ ಸಂಜೆ 04 ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಬಹುದು. ಕೆಇಎ ಇ-ಮೇಲ್ ವಿಳಾಸ keauthority-ka@nic.in ಗೆ ಆಕ್ಷೇಪಣೆ ಅರ್ಜಿ ಸಲ್ಲಿಸಬಹುದು.
ಕೆಪಿಟಿಸಿಎಲ್ ಹುದ್ದೆಗಳಿಗೆ ಮೇಲೆ ತಿಳಿಸಿದ ದಿನಾಂಕಗಳಂದು ಎರಡು ಸೆಷನ್‌ಗಳಲ್ಲಿ ಪರೀಕ್ಷೆ ನಡೆಯಲಿದೆ. ಮೊದಲ ಸೆಷನ್ ಬೆಳಿಗ್ಗೆ 10-30 ರಿಂದ 12-30 ರವರೆಗೆ, ಎರಡನೇ ಸೆಷನ್ ಪರೀಕ್ಷೆ ಮಧ್ಯಾಹ್ನ 02 ರಿಂದ 05 ಗಂಟೆವರೆಗೆ ನಡೆಯಲಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೆಪಿಟಿಸಿಎಲ್ ಹುದ್ದೆಗಳಿಗೆ ಕೆಇಎ ಪರೀಕ್ಷೆ ನಡೆಸಲಿದೆ. ಕೆಪಿಟಿಸಿಎಲ್ ಸಂಭಾವ್ಯ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಚೆಕ್ ಮಾಡಬಹುದು.